Saturday, March 23, 2013

ಮುಲ್ಕಿ ವೆಂಕಟರಮಣ


 ಓದುಗರಿಗೆ ವಂದನೆಗಳು ..
ಬಹುದಿನದ ಮೇಲೆ ಬರೆಯುವ ಕನಸು, ಮನಸು, ಹುಮ್ಮಸು ಬಂದಿದೆ, ಬರೆಯುತ್ತಿರುವೆ.
ಉಡುಪಿ, ಮಂಗಳೂರು ಮಾರ್ಗ ಮಧ್ಯದಲ್ಲಿದೆ ಊರು ಮುಲ್ಕಿ. ನಾನಿರುವ ಸುರತ್ಕಲ್ ಊರಿನಿಂದ ಹತ್ತು ನಿಮಿಷದ ಹಾದಿ.
ಮುಲ್ಕಿಯಲ್ಲಿ ಪ್ರಸ್ಸಿದ್ಧವಾದ ಪುರಾತನವಾದ ವೆಂಕಟರಮಣನ ದೇವಸ್ಥಾನವಿರುವುದನ್ನು ನನ್ನ ಚಿಕ್ಕಪ್ಪನಿಂದ ಅರಿತೆ. ಹಿಂದೊಮ್ಮೆ ಅವರು ಭೇಟಿ ಮಾಡಿದ್ದನ್ನು ವಿವರಿಸಿದಾಗ  ಅಲ್ಲಿಗೆ ಹೋಗುವ ಮನಸ್ಸಾಗಿತ್ತು, ಕಾಲ ಇಂದು ಕೂಡಿ ಬಂತು.


ದೇವಸ್ಥಾನವು ಊರಿನ ಒಳ ವಲಯದಲ್ಲಿದ್ದು, ಅತ್ಯಂತ ಪ್ರಶಾಂತ ವಾತಾವರಣ ಸೃಷ್ಟಿಸಿದೆ. ರಾಷ್ಟ್ರೀಯ ಹೆದ್ದಾರಿಯಿಂದ, ಧೂಳು, ಗದ್ದಲಗಳಿಂದ ಬಹು ದೂರದಲ್ಲಿದ್ದು ತಂಪಾದ ಅನುಭವವನ್ನು ಕೊಡುತ್ತಿತ್ತು. ಗುಡಿಯ ಪ್ರಾಂಗಣ ಅತಿ ದೊಡ್ಡದಾಗಿದೆ, ಗೋಪುರ, ಗರುಡಗಂಬವನ್ನು ದಾಟಿ, ಒಳಗೆ ನಾನು ಮತ್ತು ನನ್ನ ಸ್ನೇಹಿತ ಪ್ರವೇಶಿಸಿದೆವು. ಇದರ ಪ್ರಸಿದ್ಧಿಯನ್ನು ಕೇಳಿದ್ದ  ನಾನು, ಮೂರ್ತಿ, ತಿರುಪತಿಯಷ್ಟು ದೊಡ್ದದಿಲ್ಲದಿದ್ದರೂ, ಮೈಸೂರಿನ ಒಂಟಿಕೊಪ್ಪಲ್ ದೇವಸ್ಥಾನದ ಮೂರ್ತಿಯಷ್ಟಾದರೂ ಇರಬಹುದೆಂಬ ಕಲ್ಪನೆ ಸಹಜವಾಗಿಯೇ ಚಿತ್ರಣದ ಸಮೇತ ಬಂದಿತ್ತು.

ಆದರೆ ಒಳ ಹೊಕ್ಕಂತೆ ಕಂಡದ್ದೆ ಬೇರೆ. ಗರ್ಭಗುಡಿಯ ದ್ವಾರದಿಂದ ಸಾಕಷ್ಟು ದೂರದಲ್ಲಿ, ಮೂರು ಮೂರ್ತಿಗಳನ್ನು ಕಂಡೆನು.
ಮೂರ್ತಿಗಳ ಎಣಿಕೆಗಳು ದೊರೆಯುವಷ್ಟೇ ಸ್ಪಷ್ಟವಾಗಿತ್ತು ಆ ದೃಷ್ಯ. ಎಲ್ಲ ಮೂರ್ತಿಗಳ ಆಕಾರ ಬಹು ಚಿಕ್ಕದ್ದಗಿತ್ತು.  ವೆಂಕಟರಮಣನ ಆ ಠೀವಿ, ತೊಡೆಯ ಮೇಲಿನ ಕೈ, ಎದೆಯ ಮೇಲೆ ಲಕ್ಷ್ಮಿ, ಅಕ್ಕ ಪಕ್ಕದಲ್ಲಿ ಶ್ರೀ ಭೂ ದೇವಿಯರು, ಇದ್ಯಾವುದನ್ನೂ ಸ್ಪಷ್ಟವಾಗಿ ಕಾಣದೆ ನಿರಶೆಯಾಯಿತು. ದೂರದ ದೃಷ್ಟಿ (short sight ಎಂದರ್ಥ ಅಷ್ಟೇ ) ಕಡಿಮೆ ಇರುವುದು ನೆನಪಾಗಿ, ಕನ್ನಡಕದಿಂದ ಸ್ವಲ್ಪ ಹೆಚ್ಚು ಸ್ಪಷ್ಟ ಕಂಡೀತೆಂಬ ಆಸೆ ಒಂದೇ ಕ್ಷಣ ಬಂತಾದರೂ, ಮೂಗಿನ ಮೇಲೆ ಅದು ಆಗಲೇ ಇದ್ದದ್ದು ಕಂಡು ನಿರಾಶೆ ಮುಂದುವರಿಯಿತು.ಅಲ್ಲಿದ್ದ ಅರ್ಚಕರನ್ನೇ ಮೂರ್ತಿಗಳನ್ನು ವಿವರಿಸಲು ಬೇಡಿದೆ. ಅತ್ಯಂತ ಸಮಾಧಾನದಿಂದ ಮೂರ್ತಿಗಳ ವಿವರವಲ್ಲದೆ, ಅಲ್ಲಿನ ಇತಿಹಾಸದ ಬಗ್ಗೆ ಕೂಡ ಮಾಹಿತಿ ಕೊಟ್ಟರು. 

ಎಲಕ್ಕಿಂತ ಮೇಲಿದ್ದ ಮೂರ್ತಿಯೇ ಶ್ರೀ ಭೂ ಸಮೇತ,ಮುಲ್ಕಿಯ ವೆಂಕಟರಮಣ. ಅದರ ಕೆಳಗಡೆಯೇ ಉಗ್ರ ನರಸಿಂಹನ ಮೂರ್ತಿ ಸ್ಥಿತವಾಗಿತ್ತು. ಉಗ್ರ ನರಸಿಂಹನ ಪಕ್ಕದಲ್ಲಿಯೇ, ಶ್ರೀ ಹರಿಯ ಮತ್ತೊಂದು ಅವತಾರವಾದ ಶ್ರೀ ವೇದವ್ಯಾಸ ದೇವರ ಮೂರ್ತಿ ಇತ್ತು. ಎಲ್ಲಕ್ಕಿಂತ ಕೆಳಗೆ ಉತ್ಸವ ಮೂರ್ತಿಯಾದ ಬಿಂದುಮಾಧವನ ಮೂರ್ತಿಯಿತ್ತು. ವರ್ಷದಲ್ಲಿ ಒಂದು ಬಾರಿ ಮಾತ್ರ, ಮಾರ್ಗಶಿರ ಮಾಸದಲ್ಲಿ ಹುಣ್ಣಿಮೆಯಂದು ಬೆಳಿಗ್ಗೆ ೭ ಗಂಟೆಯಿಂದ ಸಂಜೆ ೫ ಗಂಟೆವರೆಗೆ ಅಭಿಷೇಕವನ್ನು ಮಾಡುವ ವೇಳೆಯಲ್ಲಿ ಮಾತ್ರ ಮೂರ್ತಿಗಳು ಸ್ಪಷ್ಟವಾಗಿ ಎಲ್ಲರಿಗೂ ಕಾಣಸಿಗುವುದೆಂಬ  ವಿಷಯವನ್ನೂ ಸಹ ತಿಳಿಸಿದರು. ಅಲ್ಲಿಯವರೆಗೆ ಕಾಯುವುದು ಹೇಗೆ ಪ್ರಭು ಎಂದು ಕೇಳುವಷ್ಟರಲ್ಲೇ ಆ ಆಚಾರ್ಯರ ಬಾಯಲ್ಲಿಯೇ ಶ್ರೀ ಹರಿ , " ಹಿಂದೊಮ್ಮೆ ಅಭಿಷೇಕಕ್ಕಾಗಿ ಪ್ರತಿಮೆಗಳನ್ನು ತೆಗೆದಿದ್ದ ವೇಳೆಯಲ್ಲಿ ತೆಗೆದ ಭಾವಚಿತ್ರವೊಂದನ್ನು ಬಾಗಿಲ ಸಮೀಪದಲ್ಲಿ ಹಾಕಿದ್ದೇವೆ, ನೋಡಿ" ಎಂದು ನುಡಿಸಿದ.

ಮನಸಿನಲ್ಲಿದ್ದ ನಿರಾಶೆ ದೂರವಾಗಿ, ಆಸೆ ಮತ್ತೆ ಚಿಗುರೊಡೆಯುತ್ತಿದ್ದಂತೆ ಬಾಗಿಲ ಬಳಿ ಹಾಕಿರುವ ಆ ಭಾವಚಿತ್ರವನ್ನು ನೋಡುತ್ತಾ ನಿಂತೆವು. ಶ್ರೀ ಹರಿಯ ಆ ವೈಭವವನ್ನು ಶಬ್ದಗಳಲ್ಲಿ ವರ್ಣಿಸಲಾರೆ,ಆದರೂ ಪ್ರಯತ್ನಿಸುವೆ.
ವೆಂಕಟರಮಣನ ನೋಡುತ್ತಿದ್ದಂತೆ ಸಂಕಟಗಳೆಲ್ಲಾ  ದೂರವಾಗಿಯೇ ಹೊಯಿತೆಂಬಂತಾ ಭಾವ ಮನಸ್ಸಿಗಾಯಿತು.
ಇನ್ನು ಉಗ್ರ ನರಸಿಂಹನ ಆ ಉಗ್ರತೆಯನ್ನು ಏನೆಂದು ಬಣ್ಣಿಸಲಿ.  ಹತ್ತಾರು ಕೈಗಳು, ಎಲ್ಲದರಲ್ಲೊಂದು ಆಯುಧ, ತೊಡೆಯಮೇಲೆ ಪ್ರಖರ ನಖಗಳಿಂದ  ಬಗೆಸಿಕೊಳ್ಳುತ್ತಿರುವ ಹಿರಣ್ಯಕಶಿಪು, ಕಣ್ಣಮುಂದೇ  ಹಿರಣ್ಯಕಶಿಪುವಿನ ವಧೆ ಆದಂತಾಯಿತು, ಕಂಡು ಧನ್ಯನಾದೆ. ಅಂತೆಯೇ ವೇದವ್ಯಾಸ ದೇವರ ಪ್ರತಿಮೆಯನ್ನೂ ಕಂಡೆನು.
ಈ ಪ್ರತಿಮೆಗಳನ್ನು ಪ್ರತಿಷ್ಠಾಪಿಸಿದವರು ,ಶ್ರೀ ರಾಘವೇಂದ್ರರ ಗುರುಗಳಾದ  ಶ್ರೀ ವಿಜಯಿಂದ್ರ ತೀರ್ಥರು . ಏಳು ನೂರು ವರ್ಷಗಳ ಇತಿಹಾಸವಿರುವ ಈ ಪ್ರತಿಮೆಗಳನ್ನು ಮಂಗಳೂರಿನ ಕೊಟ್ಟಾರ ದ ರಾಯರ ಸಂಸ್ಥಾನದಿಂದ ತಂದು ಇಲ್ಲಿ ಪ್ರತಿಷ್ಠಾಪಿಸಲಾಗಿದೆ. ಈ ಮೂರ್ತಿಗಳಲ್ಲದೆ ಪಕ್ಕದಲ್ಲಿಯೇ, ಮುಖ್ಯ ಪ್ರಾಣದೇವರ, ಗಣಪತಿಯ, ಮಹಾಲಕ್ಷ್ಮಿಯ, ಗರುಡ ದೇವರ ಸನ್ನಿಧಾನವೂ ಇದೆ.



ನಂದಾದೀಪ ಸೇವೆಯನ್ನು ಮಾಡಿಸಲು ಮುಂದಾದೆ, ಸಂಕಲ್ಪವನ್ನು ಮಾಡಿಸಿದ ಆಚಾರ್ಯರು, ಎಣ್ಣೆಯ ಪಾತ್ರೆಯಲ್ಲಿ ನನ್ನ ಪ್ರತಿಬಿಂಬವನ್ನು ನೋಡಿಸಿ ಭಗವಂತನಿಗೆ ಆ ಎಣ್ಣೆಯನ್ನು ಅರ್ಪಿಸಿದರು. 
ಹಿರಿಯರಿಗೆ ನಮಸ್ಕರಿಸಿ ಬೀಳ್ಕೊಡುವಾಗ ಪಕ್ಕದಲ್ಲಿಯೇ ಇರುವ ಅನ್ನಪೂರ್ಣ ಛತ್ರದಲ್ಲಿಯೇ ಪ್ರಸಾದವನ್ನು ಸ್ವೀಕರಿಸಿ ಹೋಗಬೇಕೆಂದು ಅಪ್ಪಣೆ ಇತ್ತರು . ಅದರಂತೆಯೇ ಪಕ್ಕದ ಛತ್ರಕ್ಕೆ ಹೋಗುವಾಗ, ಅಲ್ಲಿಯೇ ಇದ್ದ ಬ್ರಹ್ಮ ದೇವರ ಗುಡಿಯನ್ನೂ ಕಂಡು ಛತ್ರ  ಪ್ರವೇಶಿಸಿದೆವು. ಅಲ್ಲಿ ಬಂದ ಅತಿಥಿಗಳಿಗೆ ಮಾಡುವ ಉಪಚಾರ ಅಡಿಗೆಯ ರುಚಿಯನ್ನು ಮತ್ತಷ್ಟು ವರ್ಧಿಸುತ್ತದೆ.
ತಾಯಿಯ ಮಮತೆಯಷ್ಟೇ ಪ್ರೀತಿಯಿಂದ ನಮಗೆ ಬಡಿಸಲಾಯಿತು, ನಮ್ಮಿಬ್ಬರ ಮುಖದಲ್ಲೂ ಕೃತಜ್ಞತಾ ಭಾವ ಜಾಗೃತವಾಗಿ, ಮುಲ್ಕಿಯ ವೆಂಕಟರಮಣನ ದರ್ಶನದ ಭಾಗ್ಯದ ಜೊತೆಗೆ, ಜೀವನದುದ್ದಕ್ಕೂ ಮರೆಯಲಾಗದ ನೆನಪನ್ನೂ ಹೊತ್ತು ಬಂದೆವು. 
ಆ ಮುಲ್ಕಿಯ ವೆಂಕಟರಮಣ ಎಲ್ಲರಿಗೂ  ಸಂಕಟ ಕಳೆದು  ಅನುಗ್ರಹಿಸಲಿ  ಎಂದು ಪ್ರಾರ್ಥಿಸುತ್ತೇನೆ
 ಧನ್ಯವಾದಗಳು. 

1 comment:

  1. Thanks for sharing information and your experience ..,

    ReplyDelete