"ಹರಿ ಚಿತ್ತ ಸತ್ಯ" ಎಂಬ ಮಾತಿನಂತೆ ಹರಿಯ ಚಿತ್ತಕ್ಕೆ ಬರುವವರೆಗೂ ರಾಯರು ಈ ಕನಸನ್ನು ನನಸಾಗಿಸುವುದಿಲ್ಲ ಎಂಬುದನ್ನು ಅರಿತು, ಹರಿಯ ಚಿತ್ತಕ್ಕೆ ಕಾಯುತ್ತಲ್ಲಿದ್ದೆ. ಅಂತೂ ಆ (ಸು)ದಿನ ಬಂದಿತು.
ಬೆಂಗಳೂರಿನಿಂದ ಮಂತ್ರಾಲಯಕ್ಕೆ ಒಂದು ರಾತ್ರಿಯ ಪಯಣ.ಬೆಳಗಾ ಮುಂಜಾನೆ ೫:೩೦ ಘಂಟೆಗೆ ಮಂತ್ರಾಲಯ ತಲುಪಿದೆ. ನನ್ನನ್ನು ಕರೆದೊಯ್ಯಲು,ತಮ್ಮ ಮನೆಯಲ್ಲೇ ಇರಬೇಕೆಂದು ವತ್ತಾಯಿಸಿದ್ದ, ನನ್ನ ಸಂಬಂಧಿಕರು ಬಂದಿದ್ದರು. ಸಂಬಂಧ ರಕ್ತದಲ್ಲ, ಅತ್ಯಂತ ಪವಿತ್ರವಾದ, ಮಹೋನ್ನತವಾದ , ನಿಷ್ಕಲ್ಮಶವಾದ ಸ್ನೇಹದ್ದು. ಸ್ನೇಹ ಇಂದಿನದಲ್ಲ, ಮೂರು ತಲೆಮಾರಿನದು. ಇದರ ಗಾಢತೆಯ ಬಗ್ಗೆ ಮುಂದೇನೂ ಹೇಳುವ ಅವಶ್ಯಕತೆ ಇಲ್ಲವೆಂದು ನನ್ನ ಭಾವನೆ.
ಅವರ ಮನೆಗೆ ನನ್ನನ್ನು ಕರೆದೊಯ್ದರು. ಮನೆ ಚಿಕ್ಕದು, ಮನಸ್ಸು? ಅಳತೆಗೆ ಮೀರಿದಷ್ಟು ದೊಡ್ಡದು. ಆಕೆ ಅತ್ಯಂತ ಸಾಧ್ವಿ, ಮನೆಯವರೆಲ್ಲರೂ ಅಷ್ಟೇ. ಸ್ನಾನ ಕರ್ಮಾದಿಗಳನ್ನು ಮುಗಿಸಿ ಅವರೊಂದಿಗೆ ನನ್ನ ಕನಸನ್ನು ನನಸಾಗಿಸುವೆಡೆಗೆ ಹೆಜ್ಜೆ ಹಾಕಿದೆನು. ಮೊದಲಿಗೆ ಗುರು ಮುಖ್ಯಪ್ರಾಣರ (ಆಂಜನೇಯರ) ದರ್ಶನವಾಯಿತು. ನಂತರ ನನ್ನನ್ನು ಗುರುಸಾರ್ವಭೌಮ ರಾಘವೇಂದ್ರರ ಮುಂದೆಯೇ ನಿಲ್ಲಿಸಿದರು. ಬೆಂಗಳೂರಿನಿಂದ ರಾಯರ ಬೃಂದಾವನದ ಎದುರು ಬರುವವರೆಗೂ ಬೇಡಿಕೆಗಳ ಪಟ್ಟಿಯನ್ನೇ ಪಠಿಸುತ್ತಾ ಬಂದಿದ್ದ ನಾನು ಮಂತ್ರಮುಗ್ಧನಾದೆ. ರಾಯರ ದರ್ಶನದಿಂದ ಮೂಕನಾದೆ. ಹೊರಬರುತ್ತಾ ಬೇಡಬೇಕೆಂದಿದ್ದನ್ನು ಬೇಡಿದೆ. ರಾಯರ ದರ್ಶನದಿಂದ ಮನಸ್ಸಿನಲ್ಲಿ ಅಲೌಕಿಕಾವಾದ ಶಾಂತಿ ಮೂಡಿತು. ಅಲೌಕಿಕಾವಾದ ಈ ಅನುಭವವನ್ನು ಲೌಕಿಕಾವಾದ ಭಾಷೆ, ಪದಗಳಲ್ಲಿ ವರ್ಣಿಸಲಾದೀತೇ? ಅದು ಅನುಭವಕ್ಕಷ್ಟೇ ಸೀಮಿತ.
" ಏನ ಬೇಡಲಿ ನಿನ್ನ ಬಳಿಗೆ ಬಂದು? ನೀನಿತ್ತ ಸೌಭಾಗ್ಯ ನಿಬಿಡವಾಗಿದೆ ಎನಗೆ..." ಎಂಬ ದಾಸರ ವಾಣಿಯ ಅರ್ಥವು ಅನುಭವಕ್ಕೆ ಬಂದಿತು.
ಅಲ್ಲಿಯೇ ಪಾರಾಯಣ ಮಾಡುತ್ತಾ, "ಸೇವಕನೆಲೊ ನಾನೂ, ಧಾವಿಸಿ ಬಂದೆನು ಸೇವೆಯ ನೀಡೋ ನೀನು..." ಎಂಬ ನುಡಿಗಳನ್ನು ಹಾಡುತ್ತಾ ರಾಯರನ್ನು ಸೇವಿಸಿದೆ. ರಾಯರು ನನ್ನ ಮನಸ್ಸಿನ್ನಲ್ಲಿ ಸೇವ್ಯ ಸೇವುಕ ಭಾವವೀಯುತ್ತಾ ಕರುಣಿಸಿದರು. ಧನ್ಯನಾದೆನೆಂಬ ಭಾವದಿಂದ ಹೊರಟೆ.
ನಡೆದಾಡುವ ರಾಯರು ಎಂದೇ ಪ್ರಸಿದ್ಧರಾದ ಶ್ರೀ ಸುಶಮೀಂದ್ರ ತೀರ್ಥರ ಬೃಂದಾವನದ ದರ್ಶನಕ್ಕಾಗಿ ಬಂದೆ.ಶ್ರೀ ಸುಶಮೀಂದ್ರ ತೀರ್ಥರ ಬಗ್ಗೆ ಕೆಲವು ವಿಷಯಗಳನ್ನು ತಿಳಿಸದಿದ್ದರೆ ಸತ್ಯಕ್ಕೆ ಅಪಚಾರ ಮಾಡಿದಂತಾದೀತು. "ಮುಗ್ಧತೆಯೇ" ಮೂರ್ತಿವೆತ್ತಂತಿದ್ದರು. ತಮ್ಮ ನಿಷ್ಕಲ್ಮಶವಾದ ನೋಟದಿಂದ ಬರುವ ಭಕ್ತರಿಗೆಲ್ಲ ಪರಮಾನಂದವನ್ನು ಕೊಡುತ್ತಿದ್ದ ಧೀಮಂತ ಯತಿಗಳವರು.ಅವರ ದರ್ಶನವಾಗುತ್ತಿದ್ದಾಗಲೇ ರಾಯರ ಮಠದ ಈಗಿನ ಯತಿಗಳಾದ ಶ್ರೀ ಸುಯತೀಂದ್ರ ತೀರ್ಥರು ಅಲ್ಲಿಗೆ ಬಂದು ದರ್ಶನದ ಭಾಗ್ಯವನ್ನು ಕರುನಿಸಿದರು.ಅವರ ಮುಖ ಕಮಲದಲ್ಲಿ, ಮುಗುಳ್ನಗುವಿನಲ್ಲಿ ಸಾತ್ವಿಕತೆ ತಾಂಡವವಾಡುತಿತ್ತು
ಕಂಡು ಧಾನ್ಯನಾದೆ.
ನಂತರ ಪಂಚಾಮೃತ ಪಡೆಯಲು ಮುಂದಾದೆ. ಅಕ್ಷರ ಸಹ ನಿಜ ಎಂಬಂತೆ ಅದು " ಪಂಚ ಅಮ್ರುತವೇ" ಸರಿ . ಅಮೃತ ಕುಡಿದ ಅನುಭವವನ್ನು ಕೊಟ್ಟ ಆ ರುಚಿಯನ್ನೂ, ಮನಸ್ಸಿಗೆ ಆದ ಆನಂದವನ್ನೂ ಎಂದಿಗೂ ಮರೆಯಲಾರೆ.
ಸಂಜೆಯ ವೇಳೆಗೆ ಹತ್ತಿರದಲ್ಲೇ ಇರುವ ಪಂಚ ಮುಖಿ ದೇವಾಲಯ,ಬಿಜ್ವಾಲೆ(ಬಿಚಾಲೆ) ಗ್ರಾಮದತ್ತ ಸಾಗಿದೆನು. ನಾಲ್ಕು ಘಂಟೆಗೆ ನಮ್ಮೂರಿನ ಮಧ್ಯಾನ ಒಂದರ ಬಿಸಿಲಿನ ಭಾಸವಾಗುತಿತ್ತು. ಮೊದಲಿಗೆ ಬಿಚಾಲೆ ತಲುಪಿದೆನು. ರಾಯರ ಪರಮ ಶಿಷ್ಯರಾದ, "ರಾಘವೇಂದ್ರ ಸ್ತೋತ್ರವನ್ನು" ರಚಿಸಿದ
ಶ್ರೀ ಅಪ್ಪಣ್ಣಾಚಾರ್ಯರ ಊರು ಬಿಚಾಲೆ.
ಅಪ್ಪಣ್ಣಾಚಾರ್ಯರು: ಸದಾ ರಾಯರ ಸೇವೆಯಲ್ಲೇ ಮಗ್ನರಾಗಿರುತ್ತಿದ್ದ, ರಾಯರನ್ನು ಬೃಂದಾವನಾಸ್ಥರಾಗಲೂ ಬಿಡುವುದಿಲ್ಲವೆಂದು ಹಟವಿಡಿದಿದ್ದ ಆಚಾರ್ಯರನ್ನು ರಾಯರು, ಬೃಂದಾವನಾಸ್ಥರಾಗುವ ಸಮಯದಲ್ಲಿ, ದೇಶ ಸಂಚಾರಕ್ಕೆ ಕಳುಹಿಸಿದರು. ಸ್ವತಃ ತಾವು ಬೃಂದಾವನಾಸ್ಥರಾಗಾಲು ಸಿದ್ಧರಾದಾರು.
ಇದನ್ನರಿತ ಆಚಾರ್ಯರು ಪ್ರವಾಸವನ್ನು ಅರ್ಧದಲ್ಲಿಯೇ ಕೈ ಬಿಟ್ಟು, ಓಡೋಡಿ ಬಿಚ್ಚಾಲೆಗೆ ಮರಳಿ ಬಂದರು. ಮಂತ್ರಾಲಯದಲ್ಲಿ ರಾಯರು ಬೃಂದಾವನಾಸ್ಥರಾಗುತ್ತಿರುವ ವಿಷಯವನ್ನು ತಿಳಿದ ಆಚಾರ್ಯರು ಪ್ರವಾಹದಿಂದ ತುಂಬಿರುವ ತುಂಗ ನದಿಯಲ್ಲಿ ತಮ್ಮ ಶಾಠಿಯನ್ನು ನೀರಿನ ಮೇಲೆ ಹಾಸಿ, ಅದರ ಮೇಲೆಯೇ ನಿಂತು, " ಶ್ರೀ ಪೂರ್ಣಬೋಧ ಗುರುತೀರ್ಥ ಪಾಯೋಬ್ಧಿ ಪಾರ.." ಎಂಬ ರಾಯರ ಸ್ತುತಿಯನ್ನು ಸೃಷ್ಟಿಸುತ್ತಾ ಮಂತ್ರಾಲಯದೆಡೆಗೆ ಸಾಗಿದರು. ಅವರು ಬರುವ ಸರಿಯಾದ ಸಮಯಕ್ಕೆ ಬೃಂದಾವನದ ಕಡೆಯ ಕಲ್ಲನ್ನು ಇಟ್ಟರು. ರಾಯರ ಕೊನೆಯ ದರ್ಶನ ಸಿಗದ,ಶೋಕದಿಂದ ಕೂಡಿದ್ದ, ಶ್ಲೋಕವನ್ನು ಉಚ್ಚರಿಸುತ್ತಿದ್ದ ಆಚಾರ್ಯರು, ಮೂಕರಾದರು. ಅಪರೋಕ್ಷ ಜ್ಞಾನಿಗಳಾದ ರಾಯರು ಬೃಂದಾವನದ ಒಳಗಿನಿಂದಲೇ "ಸಾಕ್ಷಿ ಹಯಾ ಸ್ತೋತ್ರಹಿ" ಎಂಬ ವಾಕ್ಯದಿಂದ ಶ್ಲೋಕವನ್ನು ಪೂರ್ಣಗೊಳಿಸಿದರು. ಈ ವಾಕ್ಯದ ಅರ್ಥ , ಇಲ್ಲಿಯವರೆಗೆ ಆಚಾರ್ಯರು ಸ್ತುತಿಸಿದ ಸ್ತುತಿ, ಅದನ್ನು ಪಠಿಸುವವರೆಗೆ ಆಗುವ ಅನುಗ್ರಹಗಳು, ಅಕ್ಷರಸಹ ಸತ್ಯ. ಇದಕ್ಕೆ ಸಾಕ್ಷಿ ಹಯಗ್ರೀವ ರೂಪಿಯಾದಸ್ವಯಂ ನಾರಾಯಣ ಎಂಬುದಾಗಿದೆ.
ಇದಾದ ನಾಲ್ಕು ತಿಂಗಳುಗಳ ಪರ್ಯಂತ ಆಚಾರ್ಯರು ಬಿಚ್ಚಾಲೆ ಇಂದ ಮಂಚಾಲೆ, ಪ್ರತಿ ದಿನವೂ ಸಂಚರಿಸಿ ರಾಯರ ಸೇವೆ ಮಾಡಿದರು.
ಒಂದು ದಿನ ರಾಯರು ಅವರಿಗೆ ಸ್ವಪ್ನದಲ್ಲಿ ಕಂಡು, ಬಿಚ್ಚಾಲೆಯಲ್ಲಿಯೇ ಬೃಂದಾವನವನ್ನು ಕಟ್ಟಿಸು, ನಾನ್ನ ಸನ್ನಿಧಾನ ಅಲ್ಲಿಯೂ ಇರುವುದೆಂದು ತಿಳಿಸಿದರು.
ಅಪ್ಪಣ್ನಾಚಾರ್ಯರ ವಂಶಸ್ಥರಾದ ಶ್ರೀ ರಾಘವೇಂದ್ರರು ನಮಗೆ ಆ ಬೃಂದಾವನವನ್ನು ತೋರಿಸಿದರು. ಭಕ್ತಿ ಪರವಶಾವಾದ ಮನಸ್ಸಿನಿಂದ ಕೈ ಮುಗಿದು,
ರಾಯರ ಸ್ತೋತ್ರವನ್ನು ಪಠಿಸುತ್ತಾ ಮುಂದೆ ಸಾಗಿದೆನು.
ಈ ಪಯಣದಲ್ಲಿ ಅಲ್ಲಿಯ ವಾಸಿಗಳಲ್ಲಿ, ಕೆಲವೇ ದಿನಗಳ ಹಿಂದೆ ಉಂಟಾದ ಮಹಾ ಭಯಂಕರ ಪ್ರಳಯದ ಬಗ್ಗೆ ವಿಚಾರಿಸಿದೆನು. ಯಾರೂ ನೆನೆಯಲಿಷ್ಟಪಡದ ಆ ದುರ್ಘಟನೆಯ ವಿವರಗಳನ್ನು ತಿಳಿದೆನು. ಕರಳು ಕಿವುಚಿದಂತಾಯಿತು. ನನ್ನ ಸಂಬಂಧಿಕರ ಮನೆಯೂ ಪೂರ್ಣವಾಗಿ ಮುಳುಗಿ
ಹೋಗಿತ್ತೆಂಬುದನ್ನು ತಿಳಿದೆನು. ಅನುಭವಿಸಿದವರಿಗೆ ಕುತ್ತು, ಬೇರೆಯವರಿಗೇನು ಗೊತ್ತು?. ನಾವು ಊಹಿಸಲೂ ಸಾಧ್ಯವಾಗದ ಅನುಭವದ ಮಾತುಗಳನ್ನು ಕೇಳಿದೆ. ಒಂದು ಕ್ಷಣ ನಾನವರ ಜಾಗದಲ್ಲಿ ನಿಲ್ಲಲ್ಲೂ ಪ್ರಯತ್ನಿಸಿದೆ. ಅಂತಹ ಪ್ರವಾಹದಲ್ಲಿ ಮೊದಲು ಉಳಿಸಿಕೊಳ್ಳಬೇಕಾದ ವಸ್ತು ಯಾವುದೆಂದು ಆಲೋಚಿಸಿದೆ.
ಅವರ ಮಾತುಗಳಲ್ಲೇ ನನಗೆ ಬೇಕಾದ ಉತ್ತರ ಸಿಕ್ಕಿತು - "ಜೀವ". ಈಗಲೂ ಎಲ್ಲಾ ನಷ್ಟಗಳು ಪೂರ್ಣ ತುಂಬಿದೆ ಎಂದರೆ ತಪ್ಪಾಗಬಹುದು.
ಆಸ್ತಿ, ಮನೆ ತುಂಬಬಹುದು, ಮನ?
ಒಂದು ಗುಡುಗಿಗೆ ಈಗಲೂ ಜನ ಹೆದರುತ್ತಾರೆ. ಈ ನಷ್ಟ ತುಂಬಲು ಇನ್ನೂ ಬಹುಸಮಯವೇ ಬೇಕು. ನನ್ನ ಸಂಬಂಧಿಕರು, ಈ ದುರ್ಘಟನೆಯ ವೇಳೆ ನಡೆದ ಪವಾಡಗಳು, ರಾಯರ ಮಹಿಮೆ ಎಲ್ಲವನ್ನೂ ವಿವರಿಸಿದರು. ಮೆಲಕು ಹಾಕುತ್ತಾ ನಿದ್ರಾ ಲೋಕಕ್ಕೆ ತೆರಳಿದೆ.
ಮರುದಿನ " ಅಕ್ಷಯ ತೃತಿಯಾ". ರಾಯರ ಬೃಂದಾವನಕ್ಕೆ ಗಂಧದ ಲೇಪನ. ಚಿನ್ನದ ಕವಚವನ್ನು ತೊಟ್ಟಂತೆ ಕಂಗೊಳಿಸುತ್ತಿದ್ದ ರಾಯರನ್ನು ನೋಡಿದ
ಕಂಗಳು ಧನ್ಯವಾದವು. ಸೇವೆ, ಪಾರಯಣಗಳನ್ನು ಮುಗಿಸಿ ನಡೆದೆ.
ಊಟದ ಬಗ್ಗೆ ನಾನು ಬರೆಯದಿದ್ದರೆ, ಈ ಬರಹವನ್ನು ನಾನು ಬರದೇ ಇಲ್ಲವೆಂಬ ಶಂಕೆ, ಕೆಲವರಿಗೆ ಬರುವ ಸಂಭವವಿದೆ. ಇದಕ್ಕೆ ಆಸ್ಪದ ಕೊಡದೆ, ಈ ವಿಷಯದ ಕುರಿತೂ ಕೆಲ ಮಾತುಗಳನ್ನಾಡಲಿಚ್ಚಿಸುವೆ.ಮಂತ್ರಾಲಯದಲ್ಲಿ ಹಸ್ತೋದಕ ಪಂಕ್ತಿಯಲ್ಲಿ ಭೋಜನಕ್ಕೆ ಕುಲಿತೆ. "ಪಂಚ ಭಕ್ಷ್ಯ ಪರಮಾನ್ನ " ಎಂದರೆ
ಹೀಗೆ ಇರಬೇಕೆಂದುಮನಸ್ಸಿಗೆ ಗೊಚರಿಸಿತು.ಮನಸ್ಸಿಗಾದ ಆನಂದವನ್ನು ಹೇಳಲಾಗದು. ಬಹುಶಃ ಇದೂ ಆಲೌಕಿಕವಾದದ್ದೇ ಇರಬೇಕು.
ಇಲ್ಲಿಂದ ಹೊರಡುವ ಸಮಯ, ಬೇಡವೆಂದರೂ ಬಂದೇ ಬಿಟ್ಟಿತು. ನನ್ನ ಸಂಬಂಧಿಕರ ಆತಿಥ್ಯ, ರಾಯರ ಸಾನಿಧ್ಯ, ಎರಡನ್ನೂ ಬಿಡಲಾಗದೆ ಹೋದೆ.
"ಇದು ಕೊನೆಯ ಬಾರಿಯಲ್ಲವೆಂದು" ಮನಸ್ಸಿಗೆ ಸಮಾಧಾನ ಪಡಿಸುತ್ತಾ, ನನ್ನ ಸಂಬಂಧಿಕಾರಿಗೆ, ರಾಯರಿಗೆ ನಮಿಸುತ್ತಾ, ಈ ಕೆಳಗಿನ ಶ್ಲೋಕವನ್ನು ಹೇಳುತ್ತಾ
ಮಂತ್ರಾಲಯದಿಂದ ಹೊರಹೋರಟೆ.
ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ |
ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೆ ||
ಆಪಾದ ಮೌಳಿ ಪರ್ಯಂತಂ ಗುರೂಣಾಂ ಆಕೃತಿಂ ಸ್ಮರೆತ್ |
ತೇನ ವಿಘ್ನಾಃ ಪ್ರಣಶ್ಯಂತಿ ಸಿಧ್ಯಂತಿಚ ಮನೊರಥಾಃ ||
.
hey super kano!!! good work!
ReplyDeleteAwesome write-up :)
ReplyDeletelove to read crystal clear kannada, on the whole very nice description of what comes out directly from heart, good work vasu... keep it up
ReplyDelete@anoop : Thanks :)
ReplyDelete@murali: thanks bhava..really came directly from heart :)